Random Musings

ತೊಟ್ಟಿಲ ಕೂಸು

ತೊಟ್ಟಿಲ ಕೂಸಾಗಿ ನೋಡುಗರ ಕಣ್ತಣಿಸಿ
ಅಂಬೆಗಾಲಿಡುತ ನೀ ಸಂತಸವ ಸೂಸಿ
ಪುಟ್ಟ ಹೆಜ್ಜೆಗಳ ಭರದಿ ಮುಗುಳ್ನಗೆಯ ಮೆರೆಸಿ
ಉತ್ಸಾಹ ಉಲ್ಲಾಸವನು ಮೈದೆಳೆದು ನಿಂತು
ಬೆಳೆದು ಬಂದೆ ನೀ ಬಾಲ್ಯವ ಅರೆಸಿ.

ಒಮ್ಮೆ ತಾಯಿಯ ಮಡಿಲಿನ ಪ್ರೀತಿಗೆ ಸೋತು
ಇನ್ನೊಮ್ಮೆ ತಂದೆಯ ಹೆಗಲನೇರಿ ಕೂತು
ತುಂಟಾಟದ ಅಬ್ಬರದಿ ಊಟ ನಿದಿರೆಯ ಮರೆತು
ಜಗದ ಜಂಜಾಟವ ಮರೆತರು ಮಂದಿ
ನಿನ್ನ ಆ ಮುಗ್ಧ ಲೀಲೆಗಳಲ್ಲಿ ಬೆರೆತು.

ಹುಟ್ಟಿನಿಂದಲೇ ಬಂದ ಹರ್ಷವ ಮರೆಯುವುದೇಕೆ
ಕಲಿಯದೆ ನಕ್ಕ ನಗೆಯು ಬಾಡಿ ಹೋಗುವುದೇಕೆ?
ಅಕೃತ್ರಿಮ ತೇಜಸ್ಸು ಬೆಳೆದಂತೆ ನಂದುವುದೇಕೆ
ತೃಪ್ತ ಮನಸ್ಸಿನ ಶಾಂತಿ ಬಾಲ್ಯಕ್ಕೆ ಮಾತ್ರ ಸಾಕೆ?

ಲೋಕ ಜ್ಞಾನದ ಬಿಸಿ ನಿನ್ನ ತಾಗಿದೊಡನೆ
ಸಹಜ ಸಂತೋಷವೆಲ್ಲ ಮರೆಯಾಯಿತು ಮೆಲ್ಲನೆ
ಮೋಹ ಜಾಲದಿ ಮತಿಯು ನಿಲ್ಲದಿರೆ ಸುಮ್ಮನೆ
ಸರಿ ತಪ್ಪುಗಳ ಸವಾಲಾದವು ನಿನ್ನ ಪಾಲಿನ ಸೆರೆಮನೆ
ನಾನು ತಾನೆಂಬ ಭೇದಕ್ಕೆ ಸಿಲುಕಿದೊಡನೆ
ಜಗತ್ತು ಜಯಭೇರಿ ಸಾರಿತು, ಅದು ಬಯಸಿದ್ದು ಇದನ್ನೆ.

ಕೊಲ್ಲದಿರು ನಿನ್ನೊಳಗಿಹ ಮೃದು ಕೂಸನ್ನು
ತಿಳಿಯಾಗಿಸು ಮನದ ಗಾಢ ದುಗುಡವನು
ಹೊಡೆದುರುಳಿಸು ಅಹಂಕಾರದ ಕೋಟೆಗಳನು
ಅರಸದಿರು ಮತ್ತೊಬ್ಬನ ಪರಿಪೂರ್ಣತೆಯನು
ನಂಬಿ ನಡೆ ಮುಂದೆ ನಿನ್ನಲಿಹ ದೈವವನು
ಜಗದ ಜಾಲಕ್ಕೆ ಸಿಲುಕಿ ಮರೆಯದಿರು ನಿನ್ನ ನೀನು.

  • 10 September, 2017

 

 

 

 

3 thoughts on “ತೊಟ್ಟಿಲ ಕೂಸು”

Leave a comment